ಆಕಾಶ ಬಾಣ (ರಾಕೆಟ್ )
From Wikipedia, the free encyclopedia
ರಾಕೆಟ್ ಅಥವಾ ಆಕಾಶ ಬಾಣ ಎಂದರೆ ರಾಕೆಟ್ ಎಂಜಿನ್ನಿಂದ ನೋದನ ಬಲವನ್ನು ಪಡೆಯುವ ಕ್ಷಿಪಣಿ, ಅಂತರಿಕ್ಷ ವಾಹನ ಅಥವಾ ವಿಮಾನ ಅಥವಾ ಇತರ ವಾಹನ. ಎಲ್ಲ ಆಕಾಶ ಬಾಣಗಳಲ್ಲಿ, ನಿಷ್ಕಾಸವು ಸಂಪೂರ್ಣವಾಗಿ ಬಳಕೆಗೆ ಮೊದಲು ರಾಕೆಟ್ನಲ್ಲಿ ಹೊತ್ತೊಯ್ಯಲಾದ ನೋದಕಗಳಿಂದ ರೂಪಗೊಂಡಿರುತ್ತದೆ.[1] ರಾಕೆಟ್ ಎಂಜಿನ್ಗಳು ಕ್ರಿಯೆ ಮತ್ತು ಪ್ರತಿಕ್ರಿಯೆ ಮೂಲಕ ಕಾರ್ಯನಿರ್ವಹಿಸುತ್ತವೆ. ಕೇವಲ ತಮ್ಮ ನಿಷ್ಕಾಸವನ್ನು ಅತಿ ವೇಗವಾಗಿ ಹಿಂದಕ್ಕೆ ಎಸೆಯುವ ಮೂಲಕ ರಾಕೆಟ್ ಎಂಜಿನ್ಗಳು ರಾಕೆಟ್ಗಳನ್ನು ಮುಂದಕ್ಕೆ ನೂಕುತ್ತವೆ.
ಸೇನಾ ಮತ್ತು ಮನೋರಂಜನಾ ಬಳಕೆಗಳಲ್ಲಿ ರಾಕೆಟ್ಗಳು ಕನಿಷ್ಠ ಪಕ್ಷ ೧೩ ನೆಯ ಶತಮಾನದಿಂದಲೂ ಇದ್ದವೆಂದು ದಾಖಲೆಗಳಿವೆ.[2] ೨೦ ನೆಯ ಶತಮಾನದವರೆಗೆ ಗಮನಾರ್ಹ ವೈಜ್ಞಾನಿಕ, ಅಂತರಗ್ರಹ ಮತ್ತು ಕೈಗಾರಿಕಾ ಬಳಕೆ ಆಗಲಿಲ್ಲ. ೨೦ನೇ ಶತಮಾನದಲ್ಲಿ ರಾಕೆಟ್ ವಿಜ್ಞಾನವು ಅಂತರಿಕ್ಷ ಯುಗವನ್ನು ಸಾಧ್ಯವಾಗಿಸಿದ ತಂತ್ರಜ್ಞಾನವಾಯಿತು, ಚಂದ್ರನ ಮೇಲೆ ಕಾಲಿಡುವುದನ್ನು ಒಳಗೊಂಡಂತೆ.
ಸುಡುಮದ್ದುಗಳು, ಶಸ್ತ್ರಾಸ್ತ್ರಗಳು, ನಿಷ್ಕಾಸನ ಆಸನಗಳು, ಕೃತಕ ಉಪಗ್ರಹಗಳ ಉಡಾವಣಾ ವಾಹನಗಳು, ಮಾನವನ ಅಂತರಿಕ್ಷಯಾನ ಮತ್ತು ಇತರ ಗ್ರಹಗಳ ಅನ್ವೇಷಣೆಗೆ ರಾಕೆಟ್ಗಳನ್ನು ಬಳಸಲಾಗುತ್ತದೆ. ಕಡಿಮೆ ವೇಗದ ಬಳಕೆಗೆ ಇವುಗಳು ತುಲನಾತ್ಮಕವಾಗಿ ಅಸಮರ್ಥವಾದರೂ, ಇವು ಬಹಳ ಹಗುರ ಮತ್ತು ಶಕ್ತಿಯುತವಾಗಿದ್ದು ಅತ್ಯಧಿಕ ವೇಗೋತ್ಕರ್ಷವನ್ನು ಸೃಷ್ಟಿಸಲು ಮತ್ತು ಉಚಿತ ಪ್ರಮಾಣದ ದಕ್ಷತೆಯೊಂದಿಗೆ ಅತ್ಯಂತ ಹೆಚ್ಚಿನ ವೇಗಗಳನ್ನು ಪಡೆಯಲು ಸಮರ್ಥವಾಗಿವೆ.
ರಾಸಾಯನಿಕ ರಾಕೆಟ್ಗಳು ಅತ್ಯಂತ ಸಾಮಾನ್ಯವಾದ ರಾಕೆಟ್ನ ಬಗೆಯಾಗಿವೆ. ಇವು ಸಾಮಾನ್ಯವಾಗಿ ರಾಕೆಟ್ ನೋದಕದ ದಹನದಿಂದ ತಮ್ಮ ನಿಷ್ಕಾಸವನ್ನು ಸೃಷ್ಟಿಸುತ್ತವೆ. ರಾಸಾಯನಿಕ ರಾಕೆಟ್ಗಳು ಬೃಹತ್ ಪ್ರಮಾಣದ ಶಕ್ತಿಯನ್ನು ಸುಲಭವಾಗಿ ಬಿಡುಗಡೆಯಾಗುವ ರೂಪದಲ್ಲಿ ಸಂಗ್ರಹಿಸಿಟ್ಟುಕೊಂಡಿರುತ್ತವೆ, ಮತ್ತು ಬಹಳ ಅಪಾಯಕಾರಿಯಾಗಬಹುದು. ಆದರೆ, ಎಚ್ಚರಿಕೆಯುಳ್ಳ ವಿನ್ಯಾಸ, ಪರೀಕ್ಷೆ, ನಿರ್ಮಾಣ ಮತ್ತು ಬಳಕೆಯು ಅಪಾಯಗಳನ್ನು ಕನಿಷ್ಠಗೊಳಿಸುತ್ತದೆ.