ಚಹಾ
ಚಹಾ ಎಲೆ ಮತ್ತು ನೀರಿನಿಂದ ತಯಾರಿಸಿದ ಬಿಸಿ ಪೇಯ / From Wikipedia, the free encyclopedia
ಚಹಾ ವು ಕೆಮೆಲಿಯಾ ಸೈನೆನ್ಸಿಸ್ ಸಸ್ಯದ ಎಲೆಗಳು, ಎಲೆಯ ಮೊಗ್ಗುಗಳು, ಹಾಗೂ ಅಂತರಗೆಣ್ಣುಗಳ ವ್ಯಾವಸಾಯಿಕ ಉತ್ಪನ್ನವಾಗಿದ್ದು ಹಲವಾರು ವಿಧಾನಗಳಿಂದ ಇದು ತಯಾರಿಸಲ್ಪಡುತ್ತದೆ ಮತ್ತು ಹದಗೊಳಿಸಲ್ಪಡುತ್ತದೆ. ಬಿಸಿಯಾಗಿರುವ ಅಥವಾ ಕುದಿಯುತ್ತಿರುವ ನೀರಿಗೆ ಹದಗೊಳಿಸಲಾದ ಅಥವಾ ಸಂಸ್ಕರಿಸಲಾದ ಎಲೆಗಳನ್ನು ಮಿಶ್ರಗೊಳಿಸಿ ತಯಾರಿಸಲಾಗುವ ಪರಿಮಳದ ಪಾನೀಯಕ್ಕೂ "ಚಹಾ" ಎಂದೇ ಕರೆಯಲಾಗುತ್ತದೆ ಹಾಗೂ ಇದು ಸ್ವತಃ ಕೆಮೆಲಿಯಾ ಸೈನೆನ್ಸಿಸ್ ಸಸ್ಯಕ್ಕಿರುವ ಸಾಮಾನ್ಯ ಹೆಸರಾಗಿದೆ.
ನೀರಿನ ನಂತರ, ಚಹಾವು ವಿಶ್ವದಲ್ಲಿ ಅತ್ಯಂತ ವ್ಯಾಪಕವಾಗಿ-ಬಳಸಲಾಗುತ್ತಿರುವ ಪಾನೀಯವಾಗಿದೆ.[2] ಇದು ಒಂದು ರೀತಿಯ ತಂಪುಕಾರಕ, ಕೊಂಚವೇ ಕಹಿಯಾದ, ಒಗರು ಪರಿಮಳವನ್ನು ಹೊಂದಿದ್ದು, ಅನೇಕರು ಅದರ ಆನಂದವನ್ನು ಪಡೆಯುತ್ತಾರೆ.[3]
ಕಪ್ಪು ಚಹಾ, ಊಲಾಂಗ್ ಚಹಾ, ಹಸಿರು ಚಹಾ ಮತ್ತು ಬಿಳಿ ಚಹಾ[4]- ಇವು ಮಾರುಕಟ್ಟೆಯಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಚಹಾದ ನಾಲ್ಕು ವಿಧಗಳಾಗಿವೆ. ಅವೆಲ್ಲವನ್ನೂ ಒಂದೇ ಪೊದೆಸಸ್ಯದಿಂದ ತಯಾರಿಸಬಹುದಾಗಿದ್ದರೂ, ಅವುಗಳ ಸಂಸ್ಕರಣೆಯ ಅಥವಾ ಹದಗೊಳಿಸುವ ವಿಧಾನವು ಬೇರೆ ಬೇರೆಯಾಗಿರುತ್ತದೆ. ಬಿಳಿ ಚಹಾಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಅದನ್ನು ವಿಭಿನ್ನವಾದ ರೀತಿಯಲ್ಲಿ ಬೆಳೆಯಲಾಗಿರುತ್ತದೆ. ಪು-ಎರ್ಹ್ ಚಹಾ ಎಂಬುದು, ಹುದುಗಿಸುವಿಕೆಯ ನಂತರದ ಒಂದು ಚಹಾ ಆಗಿದ್ದು, ಇದನ್ನು ಔಷಧೀಯ ಉದ್ದೇಶಗಳಿಗಾಗಿಯೂ ಅನೇಕ ವೇಳೆ ಬಳಸಲಾಗುತ್ತದೆ.[5]
ಕೆಮೆಲಿಯಾ ಸೈನೆನ್ಸಿಸ್ ನ್ನು ಒಳಗೊಳ್ಳದ ಎಲೆಗಳು, ಹೂವುಗಳು, ಹಣ್ಣು, ಮೂಲಿಕೆ ಸಸ್ಯಗಳು, ಅಥವಾ ಇತರ ಸಸ್ಯ ಸಾಮಗ್ರಿಗಳ ಒಂದು ಮಿಶ್ರಣ ಅಥವಾ ಕಷಾಯಕ್ಕೆ ಸಾಮಾನ್ಯವಾಗಿ "ಮೂಲಿಕಾ ಚಹಾ" ಎಂಬ ಪದವು ಉಲ್ಲೇಖಿಸಲ್ಪಡುತ್ತದೆ.[6] "ಕೆಂಪು ಚಹಾ" ಎಂಬ ಪದವು, ಕೆಮೆಲಿಯಾ ಸೈನೆನ್ಸಿಸ್ ನ್ನು ಒಳಗೊಳ್ಳದ ದಕ್ಷಿಣ ಆಫ್ರಿಕಾದ ರಾಯಿಬಾಸ್ ಸಸ್ಯದಿಂದ ತಯಾರಿಸಲಾದ ಒಂದು ಮಿಶ್ರಣಕ್ಕೆ ಉಲ್ಲೇಖಿಸಲ್ಪಡುತ್ತದೆ, ಅಥವಾ ಚೀನಾದ, ಕೊರಿಯಾದ, ಜಪಾನಿನ ಮತ್ತು ಪೂರ್ವ ಏಷ್ಯಾದ ಇತರ ಭಾಷೆಗಳಲ್ಲಿ ಕಪ್ಪು ಚಹಾಕ್ಕೆ ಉಲ್ಲೇಖಿಸಲ್ಪಡುತ್ತದೆ.