ಬರ
From Wikipedia, the free encyclopedia
ಬರ/ಕ್ಷಾಮ/ಜಲಕ್ಷಾಮ (ಡ್ರಾಉಟ್ ಅಥವಾ ಡ್ರೌಟ್ [ಪ್ರಾಚೀನ ಪ್ರಯೋಗ]) ಎಂದರೆ ಪ್ರದೇಶವೊಂದರಲ್ಲಿ ಜಲ/ನೀರಿನ ಲಭ್ಯತೆ/ಸರಬರಾಜಿನಲ್ಲಿ ಉಂಟಾದ ಕೊರತೆಯು ತಿಂಗಳುಗಳು ಅಥವಾ ವರ್ಷಗಳ ಕಾಲ ವಿಸ್ತರಿಸಿದಾಗ ಉಂಟಾಗುವ ಪರಿಸ್ಥಿತಿ. ಸಾಧಾರಣವಾಗಿ ಯಾವುದೇ ಪ್ರದೇಶವು ಸತತವಾಗಿ ಸರಾಸರಿ ಮಳೆ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯನ್ನು ಪಡೆಯುತ್ತಿದ್ದರೆ ಹೀಗಾಗುತ್ತದೆ. ಅದರಿಂದ ಪೀಡಿತವಾದ ಪ್ರದೇಶದ ಪರಿಸರ ವ್ಯವಸ್ಥೆ ಮತ್ತು ಕೃಷಿವ್ಯವಸ್ಥೆಗಳ ಮೇಲೆ ಇದು ಗಣನೀಯ ಪ್ರಮಾಣದ ಪ್ರಭಾವ ಬೀರಬಹುದಾಗಿರುತ್ತದೆ. ಬರ/ಜಲಕ್ಷಾಮಗಳು ಹಲವು ವರ್ಷಗಳ ಕಾಲ ಮುಂದುವರೆಯಬಲ್ಲವಾದರೂ ಅಲ್ಪ ಕಾಲದ, ತೀವ್ರತರವಾದ ಬರ/ಜಲಕ್ಷಾಮ ಕೂಡಾ ಗಮನಾರ್ಹ ಪ್ರಮಾಣದ ಹಾನಿ/ನಷ್ಟ[1] ಗಳನ್ನು ಉಂಟುಮಾಡಬಹುದಾಗಿರುತ್ತಲ್ಲದೇ ಸ್ಥಳೀಯ ಆರ್ಥಿಕತೆಗೆ ನಷ್ಟವನ್ನು ಕೂಡಾ ಉಂಟು ಮಾಡಬಲ್ಲದು.[2]
ಈ ಜಾಗತಿಕ ವಿದ್ಯಮಾನವು ಕೃಷಿವ್ಯವಸ್ಥೆಯ ಮೇಲೆ ವ್ಯಾಪಕವಾದ ಪರಿಣಾಮವನ್ನು ಬೀರುತ್ತಿದೆ. ಸಂಯುಕ್ತ ರಾಷ್ಟ್ರ ಸಂಸ್ಥೆ/ವಿಶ್ವಸಂಸ್ಥೆಯು ಅಂದಾಜಿಸುವ ಪ್ರಕಾರ, ಅರಣ್ಯನಾಶ ಮತ್ತು ವಾತಾವರಣ ಅಸ್ಥಿರತೆಗಳಿಂದಾಗಿ ಉಂಟಾಗುವ ಬರ/ಜಲಕ್ಷಾಮದಿಂದ ಪ್ರತಿ ವರ್ಷವೂ ಉಕ್ರೇನ್ ರಾಷ್ಟ್ರದ ಗಾತ್ರದಷ್ಟು ಪ್ರಮಾಣದ ಫಲವತ್ತಾದ ಮಣ್ಣುಳ್ಳ ಪ್ರದೇಶವು ನಷ್ಟವಾಗುತ್ತಲಿದೆ.[3] ದೀರ್ಘಾವಧಿಗೆ ವಿಸ್ತರಿಸಿದ ಬರ/ಜಲಕ್ಷಾಮಗಳು ಬಹಳ ಹಿಂದಿನಿಂದಲೇ ಸಾಮೂಹಿಕ ವಲಸೆಗೆ ಪ್ರಮುಖ ಕಾರಣವಾಗಿದ್ದು, ಅನೇಕ ಚಾಲ್ತಿಯಲ್ಲಿರುವ ವಲಸೆಗಳು ಹಾಗೂ ಆಫ್ರಿಕಾದ ಭೂಶಿರ ಮತ್ತು ಸಾಹೆಲ್ ಪ್ರದೇಶಗಳಲ್ಲಿ ಉಂಟಾಗಿರುವ ಇತರೆ ಮಾನವಸಂಬಂಧಿ ಬಿಕ್ಕಟ್ಟುಗಳು ಉಂಟಾಗಲು ಇದೇ ಪ್ರಧಾನ ಪಾತ್ರ ವಹಿಸಿದೆ.