ಬಿ-ಬಾಯಿಂಗ್
From Wikipedia, the free encyclopedia
ಸಾಮಾನ್ಯವಾಗಿ "ಬ್ರೇಕ್ ಡ್ಯಾನ್ಸಿಂಗ್ " ಎಂದು ಕರೆಯಲ್ಪಡುವ ಬಿ-ಬಾಯಿಂಗ್ ಮೊದಲಿಗೆ ಆಫ್ರಿಕನ್ ಅಮೆರಿಕನ್ ರ ಪೈಕಿ ಹಿಪ್-ಹಾಪ್ ಶೈಲಿಯ ಒಂದು ಅಂಗವಾಗಿ ಸೃಷ್ಟಿಸಿ, ಅಭಿವೃದ್ಧಿಗೊಳಿಸಲ್ಪಟ್ಟ ಒಂದು ಜನಪ್ರಿಯ ಸ್ಟ್ರೀಟ್ ಡ್ಯಾನ್ಸ್ (ಬೀದಿ ನೃತ್ಯ)ದ ಮಾದರಿಯಾಗಿದೆ; ನಂತರದ ದಿನಗಳಲ್ಲಿ ಇದು ನ್ಯೂ ಯಾರ್ಕ್ ನಗರದ ಲ್ಯಾಟಿನೋ ಯುವಕರಿಂದ ಮತ್ತಷ್ಟು ಅಭಿವೃದ್ಧಿಗೊಳಿಸಲ್ಪಟ್ಟಿತು.[1]: 125, 141, 153 ಈ ನೃತ್ಯವು ನಾಲ್ಕು ಅಂಶಗಳನ್ನು ಒಳಗೊಂಡಿದೆ: ಟಾಪ್ ರಾಕ್ , ಡೌನ್ ರಾಕ್ , ಶಕ್ತ ಚಲನೆಗಳು ಮತ್ತು ಸ್ಥಬ್ಧ/ಅತ್ಮಹತ್ಯೆಗಳು(ಸೂಯಿಸೈಡ್) ಗಳು . ಈ ನೃತ್ಯವನ್ನು ಹಿಪ್-ಹಾಪ್ ಮತ್ತು ಇತರ ರೀತಿಯ, ಸಾಮಾನ್ಯವಾಗಿ ಸಂಗೀತದ ವಿರಾಮಗಳನ್ನು ಹೆಚ್ಚಿಸಲೆಂದೇ ಮರುಸಂಕಲಿತವಾದ ಸಂಗೀತದ ನುಡಿಗಳಿಗೆ ಅನುಗುಣವಾಗಿ ಆಡಲಾಗುತ್ತದೆ. ಬಿ-ಬಾಯಿಂಗ್ ಗೆ ಹಿಪ್-ಹಾಪ್ ಸಂಗೀತವೇ ಆಗಬೇಕೆಂಬ ನಿರ್ಬಂಧವೇನಿಲ್ಲ; ಸಂಗೀತದ ವೇಗ ಮತ್ತು ರೀತಿಗಳು ಹೊಂದಾಣಿಕೆಯಾದರೆ ಯಾವ ವಿಧದ ಸಂಗೀತಕ್ಕಾದರೂ ಈ ನೃತ್ಯವನ್ನು ಮಾಡಬಹುದು. ಈ ನೃತ್ಯವನ್ನು ಅಭ್ಯಸಿಸಿ, ಇದರಲ್ಲಿ ನಿರತರಾಗುವವರನ್ನು ಬಿ-ಬಾಯ್, ಬಿ-ಗರ್ಲ್ ಅಥವಾ ಬ್ರೇಕರ್ ಎಂದು ಕರೆಯಲಾಗುತ್ತದೆ. ಈ ನೃತ್ಯಪಟುಗಳು ಹಲವಾರು ಬಾರಿ ಕದನಗಳಲ್ಲಿ ಭಾಗವಹಿಸುತ್ತಾರೆ; ಇಬ್ಬರು ವ್ಯಕ್ತಿಗಳ ಅಥವಾ ಕ್ರೂ(ಗುಂಪು)ಗಳ ನಡುವಣ ಔಪಚಾರಿಕ ಅಥವಾ ಅನೌಪಚಾರಿಕ ನೃತ್ಯ ಸ್ಪರ್ಧೆಯ ಮಾದರಿಯಲ್ಲಿ ಈ ಕದನಗಳು ಏರ್ಪಡುತ್ತವೆ. ಈ ನೃತ್ಯಕ್ಕೆ "ಬ್ರೇಕ್ ಡ್ಯಾನ್ಸ್" ಎಂಬ ಪದವನ್ನು ಬಳಸಲಾಗುವುದಾದರೂ, "ಬಿ-ಬಾಯಿಂಗ್" ಮತ್ತು "ಬ್ರೇಕಿಂಗ್" ಎಂಬ ಪದಗಳು ಈ ನೃತ್ಯವನ್ನು ಸೂಚಿಸುವ ಮೂಲ ಪದಗಳಾಗಿವೆ. ಈ ನೃತ್ಯಶೈಲಿರ ಹರಿಕಾರರಲ್ಲಿ ಬಹುತೇಕ ಜನರು ಹಾಗೂ ಇದರಲ್ಲಿ ನುರಿತ ಪಟುಗಳು ಈ ಪದಗಳನ್ನೇ ಉಪಯೋಗಿಸಬಯಸುತ್ತಾರೆ.[2][3]