ಮಿಡತೆ
From Wikipedia, the free encyclopedia
ಮಿಡತೆ ಆರ್ತಾಪ್ಟರ ಗಣ ಹಾಗೂ ಅಕ್ರಿಡೈಡಿಯ ಉಪಗಣದ ಲೋಕಸ್ಟಿಡೀ ಅಥವಾ ಆಕ್ರಿಡೈಯಿಡೀ ಕುಟುಂಬಕ್ಕೆ ಸೇರಿದ ಹಲವಾರು ಬಗೆಯ ಕೀಟಗಳಿಗಿರುವ ಸಾಮಾನ್ಯ ಹೆಸರು. ಚಿಮ್ಮಂಡೆ ಪರ್ಯಾಯನಾಮ. ಇದರಲ್ಲಿ ಎರಡು ಪ್ರಧಾನ ಬಗೆಗಳುಂಟು. ಒಂದ ಬಗೆಯವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಷಂಪ್ರತಿ ವಲಸೆ ಹೋಗುವಂಥವು (ಲೋಕಸ್ಟ್ಸ್). ಇನ್ನೊಂದು ಬಗೆಯವು ವಲಸೆ ಹೋಗದೆ ಇರುವಂಥವು (ಗ್ರಾಸ್ಹಾಪರ್ಸ್). ಎರಡೂ ಗುಂಪಿನವು ಸಸ್ಯಾಹಾರಿಗಳಾಗಿದ್ದು ಅನೇಕ ವೇಳೆ ಧಾನ್ಯ ಬೆಳೆಗಳಿಗೆ, ಆರ್ಥಿಕ ಬೆಳೆಗಳಿಗೆ ಮುತ್ತಿ ಅಪಾರ ಹಾನಿಯನ್ನು ಉಂಟುಮಾಡುವುವು.[1] ಇಂತವುಗಳ ಪೈಕಿ ಆಫ್ರಿಕ ಹಾಗೂ ಏಷ್ಯದ ಹಲವಾರು ದೇಶಗಳಲ್ಲಿ ವರ್ಷೇ ವರ್ಷೇ ಕಂಡುಬರುವ ಮಿಡತೆಗಳು ಅತ್ಯಂತ ಕುಪ್ರಸಿದ್ಧವಾಗಿವೆ. ಈ ಕೀಟಗಳ ಹಾವಳಿ ಎಷ್ಟು ಭೀಕರವಾಗಿರುತ್ತದೆ ಎಂದರೆ ಈ ಭೂಖಂಡಗಳ ದೇಶಗಳಲ್ಲಿ ಇವು ದಾಳಿಯಿಕ್ಕುವ ತಿಂಗಳುಗಳಲ್ಲಿ ಮಿಡತೆಗಳ ದಂಡು ಕಾರ್ಮೋಡಗಳ ತೆರದಲ್ಲಿ ಎರಗಿ ಪೈರುಗಳನ್ನು ಅತ್ಯಲ್ಪ ಸಮಯದಲ್ಲಿ ಸಂಪೂರ್ಣವಾಗಿ ಕಬಳಿಸಿ ಬರಗಾಲ ಪರಿಸ್ಧಿತಿಗಳನ್ನು ಉಂಟು ಮಾಡುವುದಿದೆ. ಉದಾಹರಣೆಗೆ ಶಿಸ್ಟೊಸರ್ಕ ಗ್ರಿಗೇರಿಯ (ಡೆಸರ್ಟ್ ಲೋಕಸ್ಟ್), ಎಂಬ ಮಿಡತೆ ಈಜಿಪ್ಟ್, ಉತ್ತರ ಆಫ್ರಿಕ, ಅರೇಬಿಯ, ಆಫ್ಘಾನಿಸ್ತಾನ ಹಾಗೂ ಉತ್ತರ ಭಾರತದಲ್ಲಿ ಅಪಾರ ಸಂಖ್ಯೆಯಲ್ಲಿ ಪೈರುಗಳ ಮೇಲೆ ದಾಳಿಯಿಕ್ಕಿ ಅಗಾಧ ನಷ್ಟವನ್ನುಂಟುಮಾಡುತ್ತದೆ.[2]