ರೈಲುಸಾರಿಗೆ
ಸಾರಿಗೆ ವ್ಯವಸ್ಥೆ / From Wikipedia, the free encyclopedia
ರೈಲುಸಾರಿಗೆಯು ಪ್ರಯಾಣಿಕರನ್ನೂ ಸರಕನ್ನೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಸಾಗಿಸಲು ಇರುವ ಪ್ರಮುಖ ಸಾರಿಗೆ ವ್ಯವಸ್ಥೆಗಳ ಪೈಕಿ ಒಂದು (ರೈಲ್ವೆ ಟ್ರಾನ್ಸ್ಪೋರ್ಟ್, ರೈಲ್ ಟ್ರಾನ್ಸ್ಪೋರ್ಟ್).[1][2] ರಸ್ತೆ ಸಾರಿಗೆ, ಜಲಸಾರಿಗೆ ಮತ್ತು ವಾಯುಸಾರಿಗೆಗಳು ಇತರ ಸಾರಿಗೆ ವ್ಯವಸ್ಥೆಗಳು. ರೈಲುಸಾರಿಗೆ ವ್ಯವಸ್ಥೆಯಲ್ಲಿ ನೆಲದ ಮೇಲೆ ಹಾಕಿರುವ ಎರಡು ಸಮಾಂತರ ಉಕ್ಕಿನ ಹಳಿಗಳ ಮೇಲೆ ಸಂಪರ್ಕವಿಟ್ಟುಕೊಂಡು, ಚಲಿಸುವ ಚಕ್ರಗಳಿರುವ, ಹಬೆ ಇಲ್ಲವೆ ಡೀಸಲ್ ಇಂಧನ ಬಳಸಿ ಮುಂದೆ ಸಾಗುವ ಯಾಂತ್ರಿಕ ಇಲ್ಲವೆ ವಿದ್ಯುಚ್ಚಾಲಿತ ಕರ್ಷಣದ ಏರ್ಪಾಡು ಇರುತ್ತದೆ. ಕರ್ಷಣಕಾರ್ಯವನ್ನು ನಿರ್ವಹಿಸುವ ಯಂತ್ರವ್ಯವಸ್ಥೆ ಎಂಜಿನ್. ಇದಕ್ಕೆ ಅನೇಕ ಬೋಗಿಗಳು ಲಗತ್ತಾಗಿದ್ದು ಇಡೀ ವ್ಯವಸ್ಥೆ ರೈಲುಗಾಡಿ ಅಥವಾ ರೈಲುಬಂಡಿ ಎನಿಸಿಕೊಳ್ಳುತ್ತದೆ.
ರೈಲುಸಾರಿಗೆಗೆ ಸಂಬಂಧಿಸಿದಂತೆ ರೈಲುಗಾಡಿಗಳ ತಯಾರಿಕೆ, ರೈಲುಮಾರ್ಗಗಳ ನಿರ್ಮಾಣ, ಇದರ ಹಿನ್ನೆಲೆಯಲ್ಲಿ ಭೂಸರ್ವೇಕ್ಷಣೆ, ಭೂಸ್ವಾಧೀನ, ಪರಿಹಾರ ನೀಡಿಕೆ, ರೈಲು ಬಂಡಿ ಹಾಗೂ ರೈಲುನಿಲ್ದಾಣಗಳ ನಿರ್ವಹಣೆ ಮತ್ತು ಸಿಬ್ಬಂದಿ ವ್ಯವಸ್ಥೆ, ರೈಲುಗಾಡಿಗಳ ಹಾಗೂ ಹಳಿಗಳ ದುರಸ್ತಿಕಾರ್ಯ, ರೈಲ್ವೆಸೇತುವೆಗಳು ಮತ್ತು ತತ್ಸಂಬಂಧೀ ಕಾಮಗಾರಿ ಕೆಲಸಗಳು, ಪ್ರಯಾಣಿಕರ ಸೌಲಭ್ಯಗಳು, ರೈಲುಸಂಚಾರದ ವಿದ್ಯುದೀಕರಣ, ಕಂಪ್ಯೂಟರೀಕರಣ, ನೆಲದಡಿಯ ರೈಲುಸಾರಿಗೆ ವ್ಯವಸ್ಥೆ, ಬೆಟ್ಟಪ್ರದೇಶದ ಲ್ಲಿಯ ರೈಲುಸಾರಿಗೆ ವ್ಯವಸ್ಥೆ, ಸುರಂಗಗಳು, ತೂಬುರೈಲು ವ್ಯವಸ್ಥೆ ಮುಂತಾದ ಹಲವಾರು ವಿಚಾರಗಳು ಬರುತ್ತವೆ. ರೈಲುವ್ಯವಸ್ಥೆಯ ಆವಿಷ್ಕಾರ, ಉಗಮ, ಬೆಳೆವಣಿಗೆ, ಯಾಂತ್ರಿಕಾಂಶ, ತಾಂತ್ರಿಕಾಂಶ ಮುಂತಾದ ಅಂಶಗಳೂ ರೈಲುಸಾರಿಗೆ ಅಡಿಯಲ್ಲಿ ಪ್ರಸ್ತಾವನೆಗೊಳ್ಳುತ್ತವೆ.