ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೆ (ಎಲ್ಸಿಡಿ)
From Wikipedia, the free encyclopedia
ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೆ (ಎಲ್ಸಿಡಿ) ಒಂದು ತೆಳ್ಳನೆಯ ಚಪ್ಪಟೆಯಾದ ಸಲಕರಣೆಯಾಗಿದ್ದು, ಇದನ್ನು ಯಾವುದೇ ಬರಹ, ಆಕೃತಿ ಮತ್ತು ಚಲಿಸುವ ಚಿತ್ರಗಳಂತಹ ವಿದ್ಯುನ್ಮಾನ ಮುಖೇನ ರೂಪಿಸಿದ ಮಾಹಿತಿಯನ್ನು ತೋರಿಸುವ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಇದರ ಉಪಯೋಗವು ಕಂಪ್ಯೂಟರ್ ಮಾನಿಟರ್, ದೂರದರ್ಶನ, ಸಂಗೀತ ಸಾಧನಗಳಲ್ಲಿ, ವಿಮಾನ ಚಾಲನೆಯ ಕೋಣೆಗಳಲ್ಲಿ ಆಗುವುದಲ್ಲದೇ ದಿನಬಳಕೆಯ ಇತರ ಸಾಧನಗಳಾದ ವೀಡಿಯೊ ಪ್ಲೇಯರ್, ಆಟದ ಸಾಧನಗಳು, ಗಡಿಯಾರ, ಕೈಗಡಿಯಾರ, ಕೋಷ್ಟಕ ಮತ್ತು ದೂರವಾಣಿಗಳಲ್ಲಿ ಸಹ ಬಳಕೆ ಆಗುತ್ತದೆ. ಇದರ ಮುಖ್ಯ ವೈಶಿಷ್ಟ್ಯಗಳೆಂದರೆ ಇದರ ಕಡಿಮೆ ತೂಕದ ರಚನೆ, ಒಂದೆಡೆಯಿಂದ ಇನ್ನೊಂದೆಡೆಗೆ ಸುಲಭವಾಗಿ ಒಯ್ಯಬಹುದಾದ ಚಿಕ್ಕ ಗಾತ್ರ, ಕ್ಯಾಥೊಡ್ ರೇ ಟ್ಯೂಬ್(ಸಿಆರ್ಟಿ) ಪ್ರದರ್ಶನ ತಂತ್ರಜ್ಞಾನದ ಉತ್ಪನ್ನಗಳಲ್ಲಿ ಸಾಧ್ಯವಿರದಷ್ಟು ದೊಡ್ಡ ಗಾತ್ರದ ಪರದೆಯನ್ನು ನಿರ್ಮಿಸುವ ಸಾಧ್ಯತೆ. ಇದರ ಕಡಿಮೆ ವಿದ್ಯುತ್ ಶಕ್ತಿ ಬಳಕೆಯಿಂದಾಗಿ ಇದನ್ನು ಬ್ಯಾಟರಿ ಚಾಲಿತ ಇಲೆಕ್ಟ್ರಾನಿಕ್ ವಸ್ತುಗಳಲ್ಲಿ ಬಳಸಲಾಗುತ್ತದೆ. ಇದೊಂದು ವಿದ್ಯುನ್ಮಾನ ಮುಖೇನ ಸರಿಹೊಂದಿಸಿದ ಬೆಳಕಿನ ಸಾಧನವಾಗಿದ್ದು, ವಿಭಿನ್ನ ಸಂಖ್ಯೆಯ ಪಿಕ್ಸೆಲ್ಗಳಿಂದ ಮಾಡಲ್ಪಟ್ಟ ದ್ರವ ರೂಪದ ಸ್ಪಟಿಕದಿಂದ ತುಂಬಿದ ವಸ್ತುವಾಗಿದ್ದು, ಇದನ್ನು ಬೆಳಕಿನ ಮೂಲ,ಹಿಂಬೆಳಕು ಅಥವಾ ಪ್ರತಿಫಲಕದ ಮುಂದೆ ಅಣಿಗೊಳಿಸಿದಾಗ ಒಂದೇ ಬಣ್ಣದ ಅಥವಾ ವಿವಿಧ ಬಣ್ಣದ ಪ್ರತಿಕೃತಿಗಳನ್ನು ಉತ್ಪಾದಿಸುತ್ತದೆ. ಎಲ್ಸಿಡಿ ತಂತ್ರಜ್ಞಾನದ ಅವಿಷ್ಕಾರಕ್ಕೆ ಮೊದಲ ದಾರಿಯಾಗಿದ್ದು 1888 ರಿಂದ ಪ್ರಾರಂಭವಾದ ದ್ರವ ರೂಪದ ಸ್ಪಟಿಕದ ಅವಿಷ್ಕಾರ.[1] 2008ನೆ ಇಸವಿಯ ಹೊತ್ತಿಗೆ ಎಲ್ಸಿಡಿ ಪರದೆ ಹೊಂದಿದ ದೂರದರ್ಶನಗಳ ಮಾರಾಟವು ಸಿಆರ್ಟಿ ಘಟಕಗಳ ಮಾರಾಟವನ್ನು ಮೀರಿಸಿದವು.