ವ್ಯಕ್ತನಮೂನೆ
From Wikipedia, the free encyclopedia
ವ್ಯಕ್ತನಮೂನೆಯು (ಫೀನೊಟೈಪ್)[ಟಿಪ್ಪಣಿ 1] ಜೀವಿಯೊಂದರ ಅವಲೋಕಿಸ ಬಹುದಾದ ಗುಣಗಳ ಮೊತ್ತ ಮತ್ತು ಇದು ಜೀವಿಯ ರಚನೆ, ಬೆಳವಣಿಗೆ, ಜೀವರಸಾಯನಿಕ ಅಥವಾ ದೈಹಿಕ ಕ್ರಿಯೆಗಳು, ರುತು ಸಂಬಂಧಿತ ಕ್ರಿಯೆಗಳು, ವರ್ತನೆಗಳು ಮತ್ತು ವರ್ತನೆಯ ಉಪ-ಉತ್ಪನ್ನಗಳನ್ನು (ಹಕ್ಕಿಯ ಗೂಡಿನಂತಹ) ಒಳಗೊಳ್ಳುತ್ತದೆ. ವ್ಯಕ್ತನಮೂನೆಯು ಜೀವಿಯ ವಂಶವಾಹಿಯ ಅಭಿವ್ಯಕ್ತಿ ಮತ್ತು ಪರಿಸರದ ಪ್ರಭಾವ ಮತ್ತು ಅವೆರಡರ ನಡುವಿನ ಅಂತರಕ್ರಿಯೆಯ ಪರಿಣಾಮ. ಒಂದು ಪ್ರಭೇದದ ಸಮುದಾಯದಲ್ಲಿ ಸ್ಪಷ್ಟವಾದ ವ್ಯತ್ಯಾಸಗಳುಳ್ಳ ಗುಣಗಳು ಇವೆಯೆಂದಾದರೆ ಆ ಪ್ರಭೇದವನ್ನು ಪಾಲಿಮಾರ್ಫ್ ಎಂದು ಕರೆಯಲಾಗುತ್ತದೆ
ಜೀವಿಯ ಜೀನ್ನಮೂನೆ ಅದರ ಜೀನೋಮ್ನಲ್ಲಿರುವ ಅನುವಂಶಿಕ ಸಂದೇಶಗಳು.
೧೯೧೧ರಲ್ಲಿ ವಿಲ್ಹೆಲ್ಮ್ ಜೊಹಾನಸನ್ ಜೀವಿಯ ಅನುವಂಶಿಕತೆ ಮತ್ತು ಅದು ಏನನ್ನು ಉತ್ಪಾದಿಸುತ್ತದೆ ಎಂಬುದರ ನಡುವೆ ವ್ಯತ್ಯಾಸ ಮಾಡಲು ಜೀನ್ನಮೂನೆ-ವ್ಯಕ್ತನಮೂನೆಗಳ ನಡುವೆ ವ್ಯತ್ಯಾಸದ ಚಿಂತನೆಯನ್ನು ಮುಂದಿಟ್ಟ.[1][2] ಈ ವ್ಯತ್ಯಾಸವು ಅಗಸ್ಟ್ ವೈಸಮನ್ ಮುಂದಿಟ್ಟ ಇಂತಹುದೇ ಸಲಹೆಯಾದ ಜೀವಾಂಕುರ ದ್ರವ್ಯ (ಜರ್ಮ್ ಪ್ಲಾಸಂ) ಮತ್ತು ದೈಹಿಕ ಜೀವಕೋಶಗಳ (ದೇಹ) ನಡುವಿನ ವ್ಯತ್ಯಾಸದ ಪ್ರಸ್ತಾಪವನ್ನು ಹೋಲುತ್ತಿತ್ತು.
ರಿಚರ್ಡ್ ಡಾವ್ಕಿನ್ಸ್ ೧೯೭೮ರಲ್ಲಿ[3] ಮತ್ತು ನಂತದದಲ್ಲಿ ಮತ್ತೆ ತನ್ನ ಪುಸ್ತಕ ದಿ ಎಕ್ಸಟೆಂಡೆಡ್ ಫೀನೊಟೈಪ್ನಲ್ಲಿ ೧೯೮೨ರಲ್ಲಿ ಹಕ್ಕಿಗಳ ಗೂಡು ಮತ್ತು ಇತರ ಕ್ಯಾಡಿಸ್ ನೊಣಗಳ ಕೋಶಗಳಂತಹ ರಚನೆಗಳನ್ನು ಮತ್ತು ಬೀವರ್ ಅಡ್ಡಗಟ್ಟೆ [ಟಿಪ್ಪಣಿ 2] ಮುಂತಾದವುಗಳನ್ನು “ಹಿಗ್ಗಿಸಿದ ವ್ಯಕ್ತನಮೂನೆ” ಎಂದು ಪರಿಗಣಿಸ ಬಹುದು ಎಂದು ಸೂಚಿಸುತ್ತಾರೆ.