ಸಾಸಿವೆ
From Wikipedia, the free encyclopedia
ಸಾಸಿವೆಯು ಬ್ರಾಸೀಕಾ ಮತ್ತು ಸಿನ್ಯಾಪಿಸ್ ಪಂಗಡಗಳಲ್ಲಿನ ಒಂದು ಸಸ್ಯ ಜಾತಿ. ಬ್ರಾಸಿಕಾ ಕೆಂಪೆಸ್ಟ್ರಿಸ್ ಎಂಬ ಪ್ರಭೇದದ ಈ ಸಸ್ಯ ಕ್ರೂಸಿಫೆರೆ ಅಥವಾ ಬ್ರಾಸಿಕೇಸೀ ಕುಟುಂಬಕ್ಕೆ ಸೇರುತ್ತದೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ ಇಂಡಿಯನ್ ರೇಪ್, ಹಿಂದಿಯಲ್ಲಿ ಟೊರಿಯ ಎನ್ನುತ್ತಾರೆ. ಇದರ ಸಣ್ಣದಾದ ಬೀಜಗಳನ್ನು ಒಂದು ಸಂಬಾರ ಪದಾರ್ಥವಾಗಿ ಬಳಸಲಾಗುತ್ತದೆ[1][2] ಮತ್ತು, ಅವುಗಳನ್ನು ಅರೆದು ನೀರು, ವಿನಿಗರ್ ಅಥವಾ ಇತರ ದ್ರವಗಳೊಂದಿಗೆ ಸೇರಿಸಿ ಮಸ್ಟರ್ಡ್ ಎಂಬ ವ್ಯಂಜನವನ್ನು ತಯಾರಿಸಲಾಗುತ್ತದೆ. ಬೀಜಗಳನ್ನು ಕಿವುಚಿ ಸಾಸಿವೆ ಎಣ್ಣೆಯನ್ನೂ ತಯಾರಿಸಲಾಗುತ್ತದೆ, ಮತ್ತು ಎಲೆಗಳನ್ನು ಸೊಪ್ಪಾಗಿಯೂ ತಿನ್ನಬಹುದು.
ಪುಟ್ಟ ಮೂಲಿಕೆಯಂಥ ಗಿಡದಲ್ಲಿ ಹಳದಿ ಹೂಗಳು ಬಿಡುತ್ತವೆ. ಭಾರತ ಮೂಲದ ಇದು ಭಾರತದಲ್ಲಿಯೇ ಬೆಳೆಯುವ ಸಸ್ಯ. ಉತ್ತರ ಪ್ರದೇಶ, ಪಶ್ಚಿಮ ಬಂಗಾಲ ಮತ್ತು ಪಂಜಾಬ್ ರಾಜ್ಯಗಳಲ್ಲಿ ಹೇರಳವಾಗಿ ಬೆಳೆಯುತ್ತಾರೆ. ಉಷ್ಣವಲಯ ಹಾಗೂ ಸಮಶೀತೋಷ್ಣ ವಲಯಗಳ ವಿವಿಧ ಭಾಗಗಳಲ್ಲಿಯೂ ಸಾಸುವೆ ಸೊಂಪಾಗಿ ಬೆಳೆಯುತ್ತದೆ. ಜಿಗುಟು ಅಥವಾ ಭಾರವಾದ ಜಿಗುಟು ಮಣ್ಣು ಸಾಸುವೆ ಬೆಳೆಗೆ ತುಂಬ ಪ್ರಶಸ್ತವಾದುದು. ಇದೊಂದು ವಾರ್ಷಿಕ ಗಿಡ.