ಹುಲಿ
From Wikipedia, the free encyclopedia
Quick Facts ಹುಲಿ, Scientific classification ...
ಹುಲಿ | |
---|---|
ಭಾರತದ ಬಂಧ್ವಾಗಢ್ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಬಂಗಾಳದ ಹುಲಿ. | |
Scientific classification | |
ಸಾಮ್ರಾಜ್ಯ: | ಅನಿಮೇಲಿಯಾ |
ವಿಭಾಗ: | ಕಾರ್ಡೇಟಾ |
ವರ್ಗ: | ಸಸ್ತನಿ |
ಗಣ: | ಕಾರ್ನಿವೋರಾ |
ಕುಟುಂಬ: | ಫೆಲಿಡೇ |
ಕುಲ: | ಪ್ಯಾಂಥೆರಾ |
ಪ್ರಜಾತಿ: | ಪ್ಯಾಂಥೆರಾ ಟೈಗ್ರಿಸ್ |
Binomial name | |
'ಪ್ಯಾಂಥೆರಾ ಟೈಗ್ರಿಸ್' (ಕಾರ್ಲ್ ಲಿನ್ನೇಯಸ್, 1758) | |
ಐತಿಹಾಸಿಕ ಕಾಲದಲ್ಲಿ ಹುಲಿಗಳ ವ್ಯಾಪ್ತಿ (ತಿಳಿ ಹಳದಿ ಬಣ್ಣ) ಮತ್ತು ೨೦೦೬ರಲ್ಲಿ (ಹಸಿರು ಬಣ್ಣ) |
Close
- ಹುಲಿಯು (ವೈಜ್ಞಾನಿಕ ಹೆಸರು ಪ್ಯಾಂಥೆರಾ ಟೈಗ್ರಿಸ್) ಪ್ರಾಣಿಶಾಸ್ತ್ರದ ಪ್ರಕಾರ ಫೆಲಿಡೇ ಕುಟುಂಬಕ್ಕೆ ಸೇರಿದ ಒಂದು ಜೀವಿ. ಪ್ಯಾಂಥೆರಾ ವಂಶಕ್ಕೆ ಸೇರಿದ ೪ ದೊಡ್ಡ ಬೆಕ್ಕುಗಳ ಪೈಕಿ ಹುಲಿ ಅತ್ಯಂತ ದೊಡ್ಡ ಪ್ರಾಣಿ. ದಕ್ಷಿಣ ಮತ್ತು ಪೂರ್ವ ಏಷ್ಯಾಗಳಲ್ಲಿ ವ್ಯಾಪಕವಾಗಿ ಕಾಣಬರುವ ಹುಲಿ ತನ್ನ ಆಹಾರವನ್ನು ಬೇಟೆಯಾಡಿ ಮಾಂಸ ಸಂಪಾದಿಸುವ ಪ್ರಾಣಿಗಳ ಗುಂಪಿಗೆ ಸೇರಿದೆ. ಹುಲಿಯು ೪ ಮೀ. ವರೆಗೆ (೧೩ ಅಡಿ) ಉದ್ದವನ್ನು ಹಾಗೂ ೩೦೦ ಕಿ.ಗ್ರಾಂ ವರೆಗೆ ತೂಕವನ್ನು ಹೊಂದಬಹುದು. ದೊಡ್ಡ ದೇಹ ಮತ್ತು ಅಪಾರ ಬಲ ಹೊಂದಿರುವ ಹುಲಿಯ ಕಣ್ಸೆಳೆಯುವ ಲಕ್ಷಣವೆಂದರೆ ಬಿಳೀ ಅಥವಾ ಹಳದಿ ಯಾ ಕೇಸರಿ ಬಣ್ಣದ ಮೈ ಮೇಲೆ ನೀಳವಾಗಿ ಮೇಲಿನಿಂದ ಕೆಳಗೆ ಇರುವ ಗಾಢ ಬಣ್ಣದ ಪಟ್ಟೆಗಳು. ಸಾಮಾನ್ಯವಾಗಿ ಹುಲಿಯ ದೇಹದ ಅಡಿಯ ಭಾಗ ತೆಳು ಬಣ್ಣದ್ದಾಗಿರುತ್ತದೆ. ಹುಲಿಗಳ ಜಾತಿಗಳ ಪೈಕಿ ಸೈಬೀರಿಯಾದ ಹುಲಿ ಅತ್ಯಂತ ದೊಡ್ಡ ಕಾಯವನ್ನು ಹೊಂದಿರುತ್ತದೆ.
- ಪ್ಯಾಂತೆರಾ ಎಂದರೆ ಘರ್ಜಿಸುವ ಮಾರ್ಜಾಲ ಎಂದರ್ಥ. ಈ ಪ್ಯಾಂತೆರಾ ಪ್ರಭೇದದಲ್ಲಿ ಪ್ರಾಣಿಗಳ ಗಂಟಲಿನ ಹೈಬೋಡ್ ಎಲುಬು ಘರ್ಜಿಸಲು ಸಹಕಾರಿಯಾಗಿದೆ. ಇದೇ ಪ್ಯಾಂತೆರಾ ಪ್ರಭೇದವನ್ನು ಇತರ ಬೇರೆ ಪ್ರಭೇದಗಳಿಂದ ಪ್ರತ್ಯೇಕಿಸುವುದು. ಹಿಂದೆ ಹುಲಿ ಪ್ರಭೇದಗಳನ್ನು ಎಂಟು ಉಪ ಪ್ರಭೇದಗಳಾಗಿ ವಿಂಗಡಿಸಲಾಗಿತ್ತು. ಟೈಗ್ರಿಸ್ ದಕ್ಷಿಣ ಏಷ್ಯಾದಲ್ಲಿ, ಅಲ್ಟೈಕಾ ನೈರುತ್ಯ ಏಷ್ಯಾದಲ್ಲಿ, ಅಮೈಯೆನ್ಸಿಸ್ ದಕ್ಷಿಣ ಮಧ್ಯ ಚೈನಾದಲ್ಲಿ, ವರ್ಗಾಟ ಪಶ್ಚಿಮ ಏಷ್ಯಾದಲ್ಲಿ, ಕರ್ಬೆಟಿ ಇಂಡೋಚೀನಾದಲ್ಲಿ, ಸಾಡೈಕಾ ಮತ್ತು ಸುಮಾತ್ರೆ ಕ್ರಮವಾಗಿ ಇಂಡೊನೇಷಿಯಾದ ಬಾಲಿ ದ್ವೀಪಗಳು ಹಾಗೂ ಜಾವಾ ಮತ್ತು ಸುಮಾತ್ರಗಳಲ್ಲಿ. ಆದರೆ, ಇವುಗಳಲ್ಲಿ ಮೂರು ಮಾತ್ರ ನೈಜ ಪ್ರಭೇದಗಳೆಂದೂ ಉಳಿದವು ತಪ್ಪು ತೀರ್ಮಾನಗಳಿಂದಾದದ್ದು ಎಂದೂ ತಿಳಿದು ಬಂದಿದೆ. ಇಂದು ಹುಲಿಗಳ ವಿಕಾಸ, ಪ್ರಸರಣೆ ಮತ್ತು ವ್ಯಾಪಕತೆಯನ್ನು ಅರ್ಥೈಸಲು ವಿಜ್ಞಾನಿಗಳು ಆಧುನಿಕ ಆಂಗಿಕರಚನೆ, ತಳಿವಿಜ್ಞಾನ ಹಾಗೂ ಪರಿಸರ ವಿಜ್ಞಾನವನ್ನು ಅವಲಂಬಿಸಿದ್ದಾರೆ.
- ಕಾಡಿನ ಸಾಮ್ರಾಜ್ಯದಲ್ಲಿ ಹುಲಿಯೆಂದರೆ ಬಲು ಭೀತಿಹುಟ್ಟಿಸುವ ಬೇಟೆಗಾರ ಪ್ರಾಣಿ. ಮಾನವರು ಏಷ್ಯ ಖಂಡದಲ್ಲಿ ವಸತಿಹೂಡುವ ಹೊತ್ತಿಗಾಗಲೇ ಹುಲಿಗಳು ಇಲ್ಲಿನ ಅರಣ್ಯಗಳಲ್ಲಿ ಮೆರೆದಾಡುತ್ತಿದ್ದವು. ಜಿಂಕೆ, ಹಂದಿ, ಕಾಟಿ, ಅಷ್ಟೇ ಏಕೆ, ನಮ್ಮಷ್ಟೇ ದೊಡ್ಡದಾದ ಒರಾಂಗುಟಾನ್ ವಾನರನನ್ನೂ ಬೇಡೆಯಾಡಬಲ್ಲ ಹುಲಿಯೆಂದರೆ ಇತರ ಪ್ರಾಣಿಗಳ ಹಾಗೆಯೇ ಪ್ರಾಚೀನ ಮಾನವನಿಗೂ ಬಲುಭಯವಿತ್ತು. ಮುಂದಿನ ಕೆಲವು ಸಾವಿರ ವರ್ಷಗಳ ಅವಧಿಯಲ್ಲಿ, ಮಾನವ ಜನಾಂಗ ಬೇಟೆ, ಆಹಾರ ಸಂಗ್ರಹಣೆಗಳ ಪ್ರಾಚೀನತಂತ್ರಗಳಿಗೆ ಬದಲಾಗಿ ಕೃಷಿ, ಪಶುಸಂಗೋಪನೆಗಳನ್ನು ರೂಢಿಸಿಕೊಂಡಿತು. ಹುಲಿಗಳ ನೆಲೆಯಾಗಿದ್ದ ಕಾಡುಗಳನ್ನು ಕತ್ತರಿಸಿಯೋ, ಸುಟ್ಟುಹಾಕಿಯೋ ಜನರು ಬಹುತೇಕ ಭೂಪ್ರದೇಶವನ್ನು ಹುಲಿಗಳ ನಿವಾಸಕ್ಕೆ ಒಗ್ಗದ ಹಾಗೆ ರೂಪಾಂತರ ಮಾಡಿಬಿಟ್ಟರು. ಪುರಾತನ ಬೇಟೆಗಾರರು ಹುಲಿಗಳನ್ನು ಕೊಲ್ಲುವುದಕ್ಕಾಗಿ ಕುಣಿಕೆ, ಕಂದಕ, ಬಲೆ, ಈಟಿ, ಮಾರಕ ಬಂಧಗಳಂಥ ವಿವಿಧ ತಂತ್ರಗಳನ್ನು ಕಲ್ಪಿಸಿಕೊಂಡರು. ಕೈಗಾರಿಕಾ ಕ್ರಾಂತಿಯಾದ ಮೇಲೆ, ಹುಲಿಹತ್ಯೆಗಳ ಆಯುಧಗಳ ಪಟ್ಟಿಗೆ ಸಿಡಿಮದ್ದು, ಬಂದೂಕು, ರಾಸಾಯನಿಕ ವಿಷಗಳೂ ಸೇರ್ಪಡೆಯಾದವು. ಹುಲಿಯ ನಿವಾಸವನ್ನು ಆಕ್ರಮಿಸಿಕೊಂಡ ವಾನರಕುಲದ ಚತುರ ಮಾನವ ಕಂಡು ಹಿಡಿದ ಮಾರಕಾಸ್ತ್ರಗಳೆದುರಿಗೆ ಹುಲಿಯ ಪ್ರಕೃತಿದತ್ತವಾದ ಆಯುಧಗಳು ಎಂದರೆ, ಶಕ್ತಿ, ವೇಗ, ರಹಸ್ಯಚಲನೆ, ಇರುಳು ದೃಷ್ವಿ, ಮೊನಚಾದ ಹಲ್ಲು ಪಂಜಗಳು-ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಇಂದು ಹುಲಿಯ ಉಳಿವು ಮಾನವನ ತಾಂತ್ರಿಕ ನ್ಯೆಪುಣ್ಯದೆದುರು ತತ್ತರಿಸುತ್ತಿದೆ; ಇಷ್ಟಾದರೂ ಅರಣ್ಯಗಳನ್ನು ಅತಿಕ್ರಮಿಸುವ ಮಾನವನ ಲಾಲಸೆ ಅದೆಷ್ಟು ಪ್ರಬಲವಾಗಿದೆಯೆಂದರೆ ಏಷ್ಯಾದ ಕಾಡುಗಳಲ್ಲಿ ಹುಲಿಯ ಗರ್ಜನೆ ಎಂದಿಗೂ ಕೇಳಿಸದಂತೆ ಶಾಶ್ವತವಾಗಿ ಅಡಗಿಹೋಗಲಿದೆಯೆಂಬ ವಿಷಾದದ ನುಡಿಗೆ ಎಡೆಗೊಟ್ಟಿದೆ. ಏಕೆಂದರೆ, ಹುಲಿ ಎಷ್ಟು ಪ್ರಬಲವೆನಿಸಿಕೊಂಡಿದೆಯೋ ಅಷ್ವೇ ನಾಜೂಕಾದ ಜೀವಿ. ವಿರೋಧಾಭಾಸವೆಂದರೆ ಎಲ್ಲರೂ ಭಯಪಡುವ ಹುಲಿಯ ದೇಹದ ಗಾತ್ರ ಮತ್ತು ಮಾಂಸಾಹಾರದ ಪ್ರವೃತ್ತಿಯಂತಹ ವೈಶಿಷ್ಟ್ಯಗಳೇ ಅದರ ಜೀವಿ ಪರಿಸ್ಥಿತಿಯ ಸೂಕ್ಷ್ಮತೆಗೂ ಕಾರಣವಾಗಿರುವುದು.
- ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಮತ್ತು ಹುಲಿಗಳ ಸಂರಕ್ಷಣೆಯನ್ನು ಮಾಡಲು ಪ್ರತಿ ವರ್ಷದ ಜುಲೈ ೨೯ನ್ನು ‘ವಿಶ್ವ ಹುಲಿ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ಆಚರಣೆಯ ಹಿಂದಿನ ಪ್ರಮುಖ ಉದ್ದೇಶ ಅಪಾಯದಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗಾಗಿ ಜನರಲ್ಲಿ ಅರಿವು ಮೂಡಿಸುವುದು.[1]