ಮರಗೆಣಸು
From Wikipedia, the free encyclopedia
ಮರಗೆಣಸು ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ, ದಕ್ಷಿಣ ಅಮೆರಿಕಾ ಮೂಲದ ಪೊದೆಯಂತಹ ಸಸ್ಯ. ಮರಗೆಣಸಿನ ತವರು ದಕ್ಷಿಣ ಅಮೆರಿಕದ ಬ್ರಜಿಲ್. ವಿಪುಲ ಆಹಾರ ಸಂಗ್ರಹಣದಿಂದಾಗಿ ಇದರ ಬೇರು ಗೆಡ್ಡೆಯಂತೆ ದಪ್ಪವಾಗಿದ್ದು ಗೆಣಸಿನ ಆಕಾರ ಪಡೆದಿದೆ. ಆದ್ದರಿಂದಲೇ ಇದಕ್ಕೆ ಮರಗೆಣಸು ಎಂದು ಹೆಸರು. ಸಸ್ಯ ವೈಜ್ಞಾನಿಕವಾಗಿ ಇದನ್ನು ಮ್ಯಾನಿಹಾಟ್ ಯೂಟಿಲಿಸಿಮ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಮುಖ್ಯವಾಗಿ ಕೇರಳದಲ್ಲಿ ಉಪಯೋಗದಲ್ಲಿದೆ. ನೈಜೀರಿಯ ದೇಶದಲ್ಲಿ ಪ್ರಪಂಚದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಮರಗೆಣಸು ಸಿಹಿ ಅಥವಾ ಕಹಿ ಇರುತ್ತದೆ.
ಅಕ್ಕಿ ಮತ್ತು ಮೆಕ್ಕೆ ಜೋಳದ ನಂತರ ಮರಗೆಣಸು ಕಾರ್ಬೊಹೈಡ್ರೇಟ್ನ ಮೂರನೇ ಅತಿದೊಡ್ಡ ಮೂಲವಾಗಿದೆ.[1][2][3] ಮರಗೆಣಸು ಅಭಿವೃದ್ಧಿಶೀಲ ಪ್ರಪಂಚದಲ್ಲಿ ಒಂದು ಪ್ರಮುಖ ಆಹಾರವಾಗಿದೆ. ಅರ್ಧ ಬಿಲಿಯನ್ ಜನರಿಗೆ ಮೂಲಭೂತ ಆಹಾರ ಒದಗಿಸುತ್ತದೆ.[4] ಇದು ಅತ್ಯಂತ ಬರ ಸಹಿಷ್ಣು ಬೆಳೆಗಳಲ್ಲಿ ಒಂದಾಗಿದೆ. ಕನಿಷ್ಠ ಮಣ್ಣಿನಲ್ಲಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಥೈಲ್ಯಾಂಡ್ ಒಣಗಿದ ಮರಗೆಣಸಿನ ಅತಿದೊಡ್ಡ ರಫ್ತುದಾರವಾಗಿದೆ.
ಪೋರ್ಚುಗೀಸರು 17ನೆಯ ಶತಮಾನದಲ್ಲಿ ಭಾರತ ದೇಶಕ್ಕೆ ಇದನ್ನು ತಂದರು. ಮೊದಲು ಮಲಬಾರ್ ತೀರಪ್ರದೇಶದ ತಿರುವನಂತಪುರ ಮತ್ತು ಕೊಚ್ಚಿನ್ಗಳಿಗೆ ತರುವಾಯ ದೇಶದ ಇತರ ಭಾಗಗಳಿಗೆ ಹರಡಿತು.