ಶ್ರವಣ ಎಂಜಿನಿಯರಿಂಗ್
From Wikipedia, the free encyclopedia
ಶ್ರವಣ ಎಂಜಿನಿಯರಿಂಗ್ (ಆಡಿಯೋ ಎಂಜಿನಿಯರಿಂಗ್) ಎಂಬುದು ಒಂದು ಪರಿಣತ ವೃತ್ತಿಯಾಗಿದ್ದು, ಧ್ವನಿಗಳ ಮುದ್ರಿಸುವಿಕೆ, ಬೆರೆಸುವಿಕೆ ಮತ್ತು ಪ್ರತಿ ಮಾಡುವಿಕೆಗಳಿಗೆ ಸಂಬಂಧಿಸಿರುವ ಯಂತ್ರೋಪಕರಣ ಹಾಗೂ ಉಪಕರಣದ ಬಳಕೆಯೊಂದಿಗೆ ಅದು ವ್ಯವಹರಿಸುತ್ತದೆ. ವಿದ್ಯುನ್ಮಾನ ಶಾಸ್ತ್ರ, ಶ್ರವಣ ವಿಜ್ಞಾನ, ಮನೋಶ್ರವಣ ವಿಜ್ಞಾನ, ಮತ್ತು ಸಂಗೀತ ಕ್ಷೇತ್ರಗಳನ್ನು ಒಳಗೊಂಡಂತೆ ಅನೇಕ ಕಲಾತ್ಮಕ ಮತ್ತು ವೃತ್ತಿಪರ ವಲಯಗಳ ಮೇಲೆ ಈ ಕ್ಷೇತ್ರವು ಅವಲಂಬಿಸುತ್ತದೆ. ವಿಭಿನ್ನ ಬಗೆಯ ಧ್ವನಿಮುದ್ರಣ ಮಾಧ್ಯಮಗಳೊಂದಿಗೆ ಓರ್ವ ಶ್ರವಣ ಎಂಜಿನಿಯರ್ ಪ್ರಾವೀಣ್ಯತೆಯನ್ನು ಪಡೆದಿರುತ್ತಾನೆ ಹಾಗೂ ಸಾದೃಶ್ಯ ಟೇಪು (ಅನಲಾಗ್ ಟೇಪ್), ಅಂಕೀಯ ಬಹುಪಥ ಧ್ವನಿಮುದ್ರಕಗಳು (ಡಿಜಿಟಲ್ ಮಲ್ಟಿಟ್ರಾಕ್ ರೆಕಾರ್ಡರ್ಸ್) ಮತ್ತು ಕಾರ್ಯಕೇಂದ್ರಗಳಂಥ ಮಾಧ್ಯಮಗಳು, ಹಾಗೂ ಕಂಪ್ಯೂಟರ್ ಜ್ಞಾನ ಇವೇ ಮೊದಲಾದವು ಸದರಿ ಪರಿಣತಿಯ ವ್ಯಾಪ್ತಿಯಲ್ಲಿ ಬರುತ್ತವೆ. ಅಂಕೀಯ ಯುಗವು ಉದಯವಾಗುವುದರೊಂದಿಗೆ ಇದು ಹೆಚ್ಚು ಹೆಚ್ಚು ಪ್ರಾಮುಖ್ಯತೆಯನ್ನು ಗಳಿಸಿಕೊಳ್ಳುತ್ತಿದೆ. ಹೀಗಾಗಿ, ಸಮನ್ವಯಗೊಳಿಸುವಿಕೆಯಿಂದ ಸಾದೃಶ್ಯ ಸ್ವರೂಪಕ್ಕೆ, ಸಾದೃಶ್ಯ ಸ್ವರೂಪದಿಂದ ಅಂಕೀಯ ಸ್ವರೂಪಕ್ಕೆ ಮಾಡುವ ವರ್ಗಾವಣೆಗಳಿಗೆ ಸಂಬಂಧಿಸಿದ ತಂತ್ರಾಂಶ ಮತ್ತು ಯಂತ್ರಾಂಶದ ಸಮಗ್ರೀಕರಣವನ್ನು ಅರ್ಥೈಸಿಕೊಳ್ಳುವಲ್ಲಿ ಓರ್ವ ಶ್ರವಣ ಎಂಜಿನಿಯರ್ ನಿಷ್ಣಾತನಾಗಿರಬೇಕಾಗುತ್ತದೆ.
ಧ್ವನಿವಿಜ್ಞಾನದ ಎಂಜಿನಿಯರಿಂಗ್ ಎಂಬುದಾಗಿ ಕರೆಯಲ್ಪಡುವ ಔಪಚಾರಿಕ ಎಂಜಿನಿಯರಿಂಗ್ ಶಿಕ್ಷಣದ ವಿಷಯಕ್ಕೆ ಪ್ರತಿಯಾಗಿ, ಧ್ವನಿಗಳು ಮತ್ತು ಸಂಗೀತದ ಸೃಜನಶೀಲ ಹಾಗೂ ಪ್ರಾಯೋಗಿಕ ಮಗ್ಗುಲುಗಳ ಕುರಿತಾಗಿ ಶ್ರವಣ ಎಂಜಿನಿಯರಿಂಗ್ ಆಸಕ್ತಿ ವಹಿಸುತ್ತದೆ. ಫಿಲ್ ಎಕ್ ಎಂಬ ಓರ್ವ ನಿರ್ಮಾಪಕ, ಎಂಜಿನಿಯರ್, ಧ್ವನಿ ಸಂಯೋಜಕನು ಶ್ರವಣ ಎಂಜಿನಿಯರಿಂಗ್ ಕುರಿತಾಗಿ ವಿವರಿಸುತ್ತಾ, "ಇದು ಯಾವುದೇ ಯೋಜನೆಯ ಭೌತಿಕ ಮುದ್ರಿಸುವಿಕೆಗೆ (ಧ್ವನಿಮುದ್ರಣಕ್ಕೆ) ಸಂಬಂಧಿಸಿದ ವಿಷಯವಾಗಿದ್ದು, ಓರ್ವ ನಿರ್ಮಾಪಕನು ಆ ಪ್ರಕ್ರಿಯೆಯನ್ನು ನಿರ್ದೇಶಿಸುವ ಆಸಾಮಿಯಾಗಿರುತ್ತಾನೆ; ಧ್ವನಿವರ್ಧಕಗಳನ್ನು ಇರಿಸುವುದು, ಪೂರ್ವ-ವರ್ಧಕ ಗುಬುಟುಗಳನ್ನು (ಪ್ರೀ-ಆಂಪ್ ನಾಬ್ಸ್) ತಿರುಗಿಸುವುದು ಹಾಗೂ ಮಟ್ಟಗಳನ್ನು ನಿಗದಿಪಡಿಸುವುದು ಇವೇ ಮೊದಲಾದವು ಈ ಪ್ರಕ್ರಿಯೆಯಲ್ಲಿ ಸೇರಿರುತ್ತವೆ."[1] ಸದರಿ ಪ್ರಕ್ರಿಯೆ ಮತ್ತು ಕಲೆಯನ್ನು ವರ್ಧಿಸುವುದಕ್ಕೆ ಸಂಬಂಧಿಸಿದ ಹೊಸ ತಂತ್ರಜ್ಞಾನ, ಉಪಕರಣ ಹಾಗೂ ಕೌಶಲಗಳನ್ನೂ ಸಹ ಅನೇಕ ಧ್ವನಿಮುದ್ರಣ ಎಂಜಿನಿಯರ್ಗಳು ಕಂಡುಹಿಡಿದಿದ್ದಾರೆ.[2]